ಕಳ್ಳತನ ಆರೋಪದ ಮೇಲೆ ಬಟ್ಟೆ ಬಿಚ್ಚಿಸಿ ಅವಮಾನ :ವಿದ್ಯಾರ್ಥಿನಿ ಆತ್ಮಹತ್ಯೆ

Views: 171
ಬಾಗಲಕೋಟೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಶಾಲಾ ಶಿಕ್ಷಕಿಯರ ವರ್ತನೆಗೆ ಬೇಸತ್ತು 8ನೇ ತರಗತಿ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ದಿವ್ಯಾ ಬಾರಕೇರ (14) ಮೃತ ವಿದ್ಯಾರ್ಥಿನಿ.
8ನೇ ತರಗತಿ ಓದುತ್ತಿದ್ದ ದಿವ್ಯಾ ಬಾರಕೇರ ಮೇಲೆ ಶಾಲಾ ಶಿಕ್ಷಕಿಯರು ಕಳ್ಳತನ ಮಾಡಿದ ಆರೋಪ ಹೊರಿಸಿದ್ದಾರೆ. ಕದ್ದ ಹಣ ಚೆಕ್ ಮಾಡಲು ಬಾಲಕಿಯನ್ನು ಶಿಕ್ಷಕಿಯರು ಬಟ್ಟೆ ಬಿಚ್ಚಿದ್ದರು ಎಂದು ಆರೋಪಿಸಲಾಗಿದೆ. ಕಳ್ಳತನದ ಅನುಮಾನಕ್ಕೆ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ನೀಡಲಾಗಿದೆ
ಕಳೆದ ಮಾರ್ಚ್ 14 ರಂದು ಶಿಕ್ಷಕಿಯೊಬ್ಬರ 2 ಸಾವಿರ ರೂಪಾಯಿ ಹಣ ಕಳೆದು ಹೋಗಿತ್ತು. ಆಗ ಶಿಕ್ಷಕಿಯರು ಕೆಲವು ವಿದ್ಯಾರ್ಥಿಗಳ ಮೇಲೆ ಸಂಶಯ ಬಂದು ದೇವರ ಮೇಲೆ ಆಣೆ ಮಾಡಿಸಿದ್ದರು.ಮತ್ತೆ ಪುನಃ ಬಟ್ಟೆ ಬಿಚ್ಚಿಸಿ ಚೆಕ್ ಮಾಡಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಬಾಲಕಿಯ ಕುಟುಂಬಸ್ಥರು ಇಬ್ಬರು ಶಿಕ್ಷಕಿಯರ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮತ್ತೊಂದೆಡೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರು ಆದರೆ ಕುಟುಂಬಸ್ಥರು ಮುಚ್ಚಿಟ್ಟಿದ್ದಾರೆ. ಶವ ಸಂಸ್ಕಾರ ಮಾಡಿದ ಬಳಿಕ ಬಾಲಕಿ ಕುಟುಂಬಸ್ಥರು ದೂರು ನೀಡಿದ್ದಾರೆ. ಸಾಕ್ಷಿ ನಾಶದ ಹಿನ್ನೆಲೆಯಲ್ಲಿ ಕುಟುಂಬಸ್ಥರ ಮೇಲೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.