ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿದೆ ಡ್ರಗ್ಸ್ ,ಗಾಂಜಾ, ಮಾದಕ ದ್ರವ್ಯ ಪ್ರಕರಣ

Views: 6
ಕುಂದಾಪುರ: ಇತ್ತೀಚಿಗೆ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಮಡಿಕೇರಿ ಜಿಲ್ಲೆಗಳಲ್ಲಿ ಡ್ರಗ್ಸ್ ,ಗಾಂಜಾ ,ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಮಾದಕ ವ್ಯಸನ ನಮ್ಮ ಇಡೀ ದೇಹವನ್ನ ಆವರಿಸಿ ನಿತ್ರಾಣ, ನರ ದೌರ್ಬಲ್ಯ, ಮೆದುಳಿಗೆ ಹಾನಿ, ಶ್ವಾಸಕೋಶ ಎಲ್ಲವನ್ನು ಹಾಳುಮಾಡುತ್ತದೆ. ಮೊದಲಿಗೆ ಇದು ಶೋಕಿಗಾಗಿ ಆರಂಭವಾಗುವ ಈ ಅಭ್ಯಾಸ ಕ್ರಮೇಣ ಚಟವಾಗಿ ಬದಲಾಗಿ ಸಾಮಾಜಿಕ ದುಷ್ಕೃತ್ಯಗಳಿಗೆ ಕಾರಣವಾಗಿದೆ.
ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಾಗರಾಜ್ ಎಂಬುವರನ್ನು ಬಂಧಿಸಿ ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾ ಸೇವಿಸಿರುವುದು ದೃಡಪಟ್ಟಿದೆ.
ಮಡಿಕೇರಿಯಲ್ಲಿ ಮನೆಯ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಸುಜಯ್( 29) ಎಂಬುವರನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿದೆ.
ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ ಸದ್ದಾಂ ಹುಸೇನ್ (35) ಹಾಗೂ ಜಾಬಿಯ ಉಲ್ಲಾಖಾನ್ (40) ಬಂದಿತ ಆರೋಪಿಗಳು ಇವರಿಂದ ಪೊಲೀಸರು 241.4ಗ್ರಾಂ ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಕುದ್ರೋಳಿಯ ಸಿಪಿಸಿ ಕಾಂಪೌಂಡ್ ನ ನಿವಾಸಿ ಇಬ್ರಾಹಿಂ (39) ಸ್ಕೂಟರ್ನಲ್ಲಿ ಗಾಂಜಾ ಗಳನ್ನು ಇಟ್ಟು ಕೊಂಡು ನಗರದ ಕುಂಟಿಕಾನ ಜಂಕ್ಷನ್ ಫ್ಲೈ ಓವರ್ ಕೆಳಗೆ ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರು ಬಂಧಿಸಿ, ಆತನಿಂದ 50 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆತನಿಗೆ ಮಂಗಳೂರು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ತಾರಾ. ಕೆ.ಸಿ ಅವರು ಆರು ತಿಂಗಳ ಕಠಿಣ ಸಜೆ ಮತ್ತು 10,000 ರೂಪಾಯಿ ದಂಡ ವಿಧಿಸಿದ್ದು, ವಿಫಲವಾದರೆ ಜೈಲು ಶಿಕ್ಷೆಗೆ ಆದೇಶ ನೀಡಿದ್ದಾರೆ.
ಯುವಕ -ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯವರು ಮನವಿ ಮಾಡಿದ್ದಾರೆ.