ಕರಾವಳಿ

ಕರಾವಳಿಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Views: 53

ಕನ್ನಡ ಕರಾವಳಿ ಸುದ್ದಿ: ಇನ್ನು ಸಂಜೆಯಾಗುತ್ತಿದ್ದಂತೆ ಶನಿವಾರ ಕಡಲನಗರಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗ ಕಡಬ, ನೆಲ್ಯಾಡಿ, ಸುಳ್ಯ, ಪಂಜ ಕಡೆಗಳಲ್ಲಿ ಗಾಳಿ-ಸಿಡಿಲು ಸಹಿತ ಮಳೆ ಸುರಿದಿದೆ. ಮರ.. ವಿದ್ಯುತ್ ಕಂಬಗಳು ಧರೆಗುರುಳಿವೆ. ಅಕಾಲಿಕ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಕಾರ್ಕಳ ಉಡುಪಿ ಕಾಪು ಕುಂದಾಪುರದಾದ್ಯಂತ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು‌ ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ವಿಪರೀತ ಉಷ್ಣಾಂಶದಿಂದ ಕಂಗೆಟ್ಟು ಹೋಗಿದ್ದ ಉಡುಪಿ ಜನ, ವರ್ಷಧಾರೆಯಿಂದ ತಂಪು ವಾತಾವರಣ ಇದೆ.

ಬೇಸಿಗೆಯಲ್ಲೇ ಮಳೆಗಾಲದಂತೆ ಸುರಿದ ವರುಣ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಮಳೆ ಅಬ್ಬರ ಜೋರಾಗಿತ್ತು. ಸುರಿದ ಮಳೆಗೆ ಕಾಫಿ ಬೆಳೆಗೆ ನೀರಾಯಿಸಲು ಹೋರಾಡುತ್ತಿದ್ದ ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಒಟ್ಟಾರೆ ಬೇಸಿಗೆಯಲ್ಲೇ ಮಳೆಗಾಲದಂತೆ ವರುಣ ಸುರಿಯುತ್ತಿರೋದು ಬಿಸಿಯಲ್ಲಿ ಬೆಂದಿದ್ದ ಜನರನ್ನು ಕೂಲ್ ಕೂಲ್ ಆಗಿಸಿದೆ.

ಕುಂದಾಪುರದಲ್ಲಿ  ಉತ್ತಮ ಮಳೆ

ಶನಿವಾರ ಸಂಜೆಯ ವೇಳೆಗೆ ಕುಂದಾಪುರದ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಬಸವಳಿದ ಜನರಿಗೆ ಒಂದಷ್ಟು ತಂಪೆರೆದಿದೆ.ಕುಂದಾಪುರ, ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ, ತೆಕ್ಕಟ್ಟೆ ಕುಂಭಾಶಿ,  ಮೊಳಹಳ್ಳಿ ಹುಣ್ಣೆಮಕ್ಕಿ, ಕೆದೂರು, ಕೊರ್ಗಿ, ಬೇಳೂರು,  ಸಿದ್ದಾಪುರ, ಶಂಕರನಾರಾಯಣ, ಹಾಲಾಡಿ ಅಮಾಸೆಬೈಲಿನಲ್ಲಿ ಉತ್ತಮ ಮಳೆಯಾಗಿದೆ.ಯಕ್ಷಗಾನ, ಧಾರ್ಮಿಕ, ಸಾಂಸ್ಕೃತಿಕ ಇನ್ನಿತರ ಕಾರ್ಯಕ್ರಮಗಳಿಗೆ ಮಳೆಯಿಂದ ಅಡಚಣೆಯಾಯಿತು.

ಎರಡು ದಿನ ಎಲ್ಲೋ ಅಲರ್ಟ್

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಏಪ್ರಿಲ್ 6 ಮತ್ತು 7 ರಂದು ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

 

Related Articles

Back to top button