ಉಡುಪಿ ಹಿರಿಯ ಬಿಜೆಪಿ ಮುಖಂಡ, ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲಕ ಬಿ.ಸುಧಾಕರ್ ಶೆಟ್ಟಿ ನಿಧನ

Views: 82
ಉಡುಪಿ: ಹಿರಿಯ ಬಿಜೆಪಿ ಮುಖಂಡ, ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲಕ ಬಿ.ಸುಧಾಕರ್ ಶೆಟ್ಟಿ (72) ಅವರು ಗುರುವಾರ ಮುಂಜಾನೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು.
ಸುಧಾಕರ್ ಶೆಟ್ಟಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. 2009ರಿಂದ 2012ರವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1999ರಲ್ಲಿ ಯು.ಆರ್.ಸಭಾಪತಿ ವಿರುದ್ಧ ಸೋಲು ಕಂಡಿದ್ದರು.
2004ರ ಚುನಾವಣೆಯಲ್ಲಿ ಟಿಕೆಟ್ ಬೇಡ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಸ್ಪರ್ಧಿಸಲು ಹಿಂದೆ ಸರಿದ ಹಿನ್ನೆಲೆಯಲ್ಲಿ ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಆದರೆ ಅವರು ಪ್ರಮೋದ್ ಮಧ್ವರಾಜ್ ವಿರುದ್ಧ ಸೋಲು ಅನುಭವಿಸಿದ್ದರು. ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ
ಸರಳ ವ್ಯಕ್ತಿತ್ವದ ಸುಧಾಕರ ಶೆಟ್ಟಿ ಅವರು ಸಾಮಾನ್ಯ ಜನರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಕೊಡುಗೈ ದಾನಿಯಾಗಿ ಜಿಲ್ಲೆಯ ಹಲವಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದರು.






