ರಾಜಕೀಯ

ಉಡುಪಿ: ಜಯಪ್ರಕಾಶ್ ಹೆಗ್ಡೆ, ಶ್ರೀನಿವಾಸ ಪೂಜಾರಿ ಭಾಷಾ ವಾರ್..!

Views: 115

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಇತ್ತೀಚೆಗೆ, ತಮ್ಮ ಎದುರಾಳಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗುರಿಯಾಗಿರಿಸಿಕೊಂಡು ನೀಡಿದ್ದ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬ್ರಹ್ಮಾವರದಲ್ಲಿ ಮಾತನಾಡಿದ್ದ ಜಯಪ್ರಕಾಶ್ ಹೆಗ್ಡೆ, ಓರ್ವ ಸಂಸದೀಯ ಪಟುವಿಗೆ ಹಿಂದಿ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ ಅತ್ಯಗತ್ಯವಾದದ್ದು ಎಂದು ಕೋಟ ಶ್ರೀನಿವಾಸ ಪೂಜಾರಿಯವರನ್ನು ಟಾರ್ಗೆಟ್ ಮಾಡಿದ್ದರು.

ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಬಿಜೆಪಿ, ಕಾಂಗ್ರೆಸ್ ಕನ್ನಡ ವಿರೋಧಿ ನಿಲುವನ್ನು ಹೊಂದಿದೆ ಎಂದು ಹೇಳಿದೆ. ಇದು ಸುದ್ದಿಯಾಗುತ್ತಿದ್ದಂತೆಯೇ ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೋಟ ಶ್ರೀನಿವಾಸ ಪೂಜಾರಿ, 6 ತಿಂಗಳಲ್ಲಿ ಹಿಂದಿ ಕಲಿತು ಸಂಸತ್ ನಲ್ಲಿ ನಿರರ್ಗಳವಾಗಿ ಮಾತನಾಡುವುದಾಗಿ ಹೇಳಿದ್ದಾರೆ.

ತಮ್ಮ ಹೇಳಿಕೆ ಪಕ್ಷಕ್ಕೆ ಹಾನಿ ಉಂಟುಮಾಡಬಹುದೆಂದು ಅರಿತ ಜಯಪ್ರಕಾಶ್ ಹೆಗ್ಡೆ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯವರ ಭಾಷಾ ಕೌಶಲ್ಯದ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ ಎಂದು ಹೆಗ್ಡೆ ತಮ್ಮ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ. ”ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಭಾಷಾಂತರಕಾರರ ಸೇವೆ ಇರುವುದರಿಂದ ಸದನದ ಸದಸ್ಯರು ಕನ್ನಡದಲ್ಲೂ ಮಾತನಾಡಬಹುದು ಎಂದು ಹೇಳಿದ್ದೆ. ಆದರೆ ಅಧಿಕಾರಶಾಹಿಗಳೊಂದಿಗೆ ಕೆಲಸ ಮಾಡಲು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡಲು ತಿಳಿದಿರುವ ಅವಶ್ಯಕತೆ ಉಂಟಾಗುತ್ತದೆ. ನಾನು ಈ ಹಿಂದೆ ಸಂಸದನಾಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಹೇಳಿದ್ದೇನೆ ಮತ್ತು ನನ್ನ ಹೇಳಿಕೆಗೆ ಬೇರೆ ಉದ್ದೇಶವಿಲ್ಲ. ಈಗ ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನಗಳು ನಡೆಯುತ್ತಿವೆ ಎಂದರು. ನಾನು ಗೌರವಯುತವಾಗಿ ಚುನಾವಣೆಯಲ್ಲಿ ಹೋರಾಡುತ್ತೇನೆ ಮತ್ತು ಕಣದಲ್ಲಿರುವ ನನ್ನ ಎದುರಾಳಿಗೂ ಗೌರವ ನೀಡುತ್ತೇನೆ ಎಂದು  ಹೆಗ್ಡೆ ಹೇಳಿದ್ದಾರೆ.

 

Related Articles

Back to top button