ಇಬ್ಬರು ಹೆಣ್ಣ ಮಕ್ಕಳು, ಪತ್ನಿಗೆ ಗುಂಡಿಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್‌ಟೆಬಲ್

Views: 0
ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಗುಂಡಿಟ್ಟು ಕೊಂದ ಪೊಲೀಸ್ ಮುಖ್ಯ ಪೇದೆ ಒಬ್ಬರು, ಬಳಿಕ ತಾವೂ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
55 ವರ್ಷ ವಯಸ್ಸಿನ ಹೆಡ್ ಕಾನ್ಸ್‌ಟೆಬಲ್ ವೆಂಕಟೇಶ್ವರುಲು ಕಡಪ ಟು ಟೌನ್ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಕುಟುಂಬಸ್ಥರನ್ನು ಹತ್ಯೆಗೈದು ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವೆಂಕಟೇಶ್ವರುಲು ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಪೊಲಿಸರಿಗೆ ಡತ್ ನೋಟ್ ಕೂಡಾ ಸಿಕ್ಕಿದೆ.
ಬುಧವಾರ ರಾತ್ರಿ 11 ಗಂಟೆವರೆಗೂ ವೆಂಕಟೇಶ್ವರುಲು ಅವರು ಪೊಲೀಸ್ ಠಾಣೆಯಲ್ಲೇ ಕೆಲಸ ಮಾಡುತ್ತಿದ್ದರು. ಬಳಿಕ ಮನೆಗೆ ಹೋಗುವಾಗ ಪಿಸ್ತೂಲು ಹಾಗೂ ಕೆಲವು ಸುತ್ತು ಗುಂಡುಗಳನ್ನೂ ಪೊಲೀಸ್ ಠಾಣೆಯಿಂದಲೇ ತೆಗೆದುಕೊಂಡು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೆಡ್ ಕಾನ್ಸ್‌ಟೆಬಲ್ ವೆಂಕಟೇಶ್ವರುಲು ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಜೊತೆಯಲ್ಲೇ ವೆಂಕಟೇಶ್ವರುಲು ಅವರು ಕೆಲವು ಕೌಟುಂಬಿಕ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ವೆಂಕಟೇಶ್ವರುಲು ಅವರ ಮೊದಲ ಮಗಳು 20 ವರ್ಷ ವಯಸ್ಸಿನವಳಾಗಿದ್ದು, ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಎರಡನೇ ಮಗಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ವೆಂಕಟೇಶ್ವರುಲು ಅವರ ಪತ್ನಿ ಗೃಹಿಣಿಯಾಗಿದ್ದರು. ಅವರ ವಯಸ್ಸು 45 ವರ್ಷ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹಾಗೂ ಬೆಟ್ಟಿಂಗ್ ಕೂಡಾ ಆಡುತ್ತಿದ್ದ ವೆಂಕಟೇಶ್ವರುಲು ಬೆಟ್ಟಿಂಗ್ ಚಟಕ್ಕೆ ತುತ್ತಾಗಿ ಭಾರೀ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಯಲ್ಲೇ ಇನ್ನಿತರ ಕೌಟುಂಬಿಕ ಸಮಸ್ಯೆಗಳೂ ಅವರಿಗೆ ಇತ್ತು.
ಪೊಲೀಸ್ ಮುಖ್ಯ ಪೇದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ್ದೇ ತಡ, ಕಡಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಸಿದ್ದಾರ್ಥ ಕೌಶಲ್ ಸೇರಿದಂತೆ ಹಲವರು ವೆಂಕಟೇಶ್ವರುಲು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖ್ಯ ಪೇದೆ ತಮ್ಮ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.