ಇಂದಿನಿಂದ SSLC ಪರೀಕ್ಷೆ ಆರಂಭ

Views: 30
ಇಂದಿನಿಂದ SSLC ಪರೀಕ್ಷೆ ಆರಂಭವಾಗಲಿದ್ದು, ರಾಜ್ಯಾದ್ಯಂತ ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
2,750 ಕೇಂದ್ರಗಳಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳಾಗಿದ್ದು, 18,225 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು ಮತ್ತು 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. 4,41,910 ಬಾಲಕರು ಮತ್ತು 4,28,058 ಬಾಲಕಿಯರು ಪರೀಕ್ಷೆಯನ್ನು ಬರೆಯುತ್ತಿದ್ದು ಈ ಬಾರಿ 5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಉರ್ದು ಮತ್ತು ಮರಾಠಿ ಸೇರಿ ಒಟ್ಟು ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧ ಮಾಡಲಾಗಿದೆ. ಕೇಂದ್ರಗಳ ಸುತ್ತಮುತ್ತ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದು ಸಿಸಿಟಿವಿ ಕ್ಯಾಮರಾ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲಾಗಿದೆ. ನಿರ್ದೇಶಕರು ಮತ್ತು ಸಹನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
SSLC ಪರೀಕ್ಷೆ ಏಪ್ರಿಲ್ 6ರವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಬಿಸಿಯೂಟ ವ್ಯವಸ್ಥೆ ಕೂಡ ಮಾಡಲಾಗಿದೆ. SSLC ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದು, SSLC ವಾರ್ಷಿಕ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಐಎಎಸ್, ನೀಟ್, ಜೆಇಇ, ಯಾವುದೇ ಪರೀಕ್ಷೆಗೆ ಇಲ್ಲದ ಕಣ್ಗಾವಲು, ವೆಬ್ ಕಾಸ್ಟಿಂಗ್ SSLC ಪರೀಕ್ಷೆಗೆ ಇರುವುದಕ್ಕೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಪೆನ್ನು, ನೀರಿನ ಬಾಟಲಿ, ಹಾಲ್ ಟಿಕೆಟ್, ಐಡಿ ಕಾರ್ಡ್ ಇನ್ನಿತರ ವಸ್ತುಗಳನ್ನು ಮರೆಯದೆ ತೆಗೆದುಕೊಂಡು ಹೋಗಬೇಕು.