ಅಮಾಸೆಬೈಲು ವಲಯ ಶೆಟ್ಟಿಗಾರ್ (ಪದ್ಮಶಾಲಿ) ಸಮಾಜ ಸೇವಾ ಸಂಘ ವಾರ್ಷಿಕ ಮಹಾಸಭೆ

Views: 292
ಕುಂದಾಪುರ: ಅಮಾಸೆಬೈಲು ವ್ಯಾಪ್ತಿಯ ತೊಂಬಟ್ಟು, ಬಳ್ಮನೆ, ಹೆಂಗವಳ್ಳಿ, ಶಂಕರನಾರಾಯಣ, ಏಳನೇ ವಾರ್ಷಿಕ ಮಹಾಸಭೆ ಜನವರಿ 28ರಂದು ಶಂಕರನಾರಾಯಣ ಹಾಲು ಡೈರಿಯ ‘ಕ್ಷೀರ ಸಭಾಭವನ’ದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಬಳ್ಮನೆ ಕರುಣಾಕರ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಮಂಗಳೂರು ಇದರ ಅಧ್ಯಕ್ಷರಾದ ರಾಮದಾಸ ಶೆಟ್ಟಿಗಾರ ಪಣಿಯಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,
‘ಸಮಾಜ ಸೇವಾ ಮನೋಭಾವನೆಯಿಂದ ಎಲ್ಲರ ಏಳಿಗೆ ಸಾಧಿಸಿದಾಗ ತನ್ನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ. ಜಯರಾಮ ಶೆಟ್ಟಿಗಾರ ಅವರು ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟವಾದ ಪ್ರತಿಭೆ ಅಡಗಿರುತ್ತದೆ ತನ್ನಲ್ಲಿರುವ ಪ್ರತಿಭೆಯನ್ನು ಸಂಘಟನೆಯ ಮುಖಾಂತರ ಸಾಕಾರಗೊಳಿಸಿ ಆ ಮೂಲಕ ಸಂದರ್ಭಕ್ಕನುಗುಣವಾಗಿ ತನ್ನ ಬಲ ಶಕ್ತಿಯನ್ನು ಪ್ರದರ್ಶಿಸಿದಾಗ ಬದುಕು ಸಾರ್ಥಕ’ ಎಂದರು.
ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಹಾಗೂ ರೇಷ್ಮೆ ಇಲಾಖಾ ವಿಸ್ತರಣಾಧಿಕಾರಿ ಶ್ರೀ ರಾಜೇಂದ್ರ ಶೆಟ್ಟಿಗಾರ ಬಸ್ರೂರು ಅವರು ಮಾತನಾಡಿ, ‘ಸಮಾಜ ಸೇವೆ ಎಂದರೆ ಮಾನವತೆಗೆ ನಿಸ್ವಾರ್ಥ ಸೇವೆ, ತನ್ನ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಮಾಜವನ್ನು ಅವಲಂಬಿಸಬೇಕಾದರೆ ಸಮಾಜದ ಒಳಿತಿಗಾಗಿ ಏನನ್ನಾದರೂ ಮಾಡಬೇಕೆಂಬುವುದು ಮತ್ತು ಸಮಾಜದ ಋಣ ತೀರಿಸಬೇಕು ಅದುವೇ ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್ ತಿಮ್ಮಪ್ಪ ಶೆಟ್ಟಿಗಾರ್ ಮುದ್ರಾಡಿ ಮಾತೃ ಸಂಘದೊಂದಿಗೆ ವಲಯ ಸಂಘಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುಧಾಕರ ಶೆಟ್ಟಿಗಾರ್, ಕನ್ನಡ ಕರಾವಳಿ ಸಂಪಾದಕ ಸುಧಾಕರ ವಕ್ವಾಡಿ, ವಲಯ ಪದ್ಮಶಾಲಿ ಸಂಘದ ಮಾಜಿ ಅಧ್ಯಕ್ಷ ವೆಂಕಟರಮಣ ಶೆಟ್ಟಿಗಾರ ಉಪಸ್ಥಿತರಿದ್ದರು.
ಸಂಘದ ಗೌರವ ಸಲಹೆಗಾರರು ಹಾಗೂ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಇತ್ತೀಚಿಗೆ ನಿಧನರಾದ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ ಶೆಟ್ಟಿಗಾರ ದೊಡ್ಡಣಗುಡ್ಡೆ ಅವರ ಸಂಸ್ಮರಣೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ತೆರವಾದ ಗೌರವಾಧ್ಯಕ್ಷ ಸ್ಥಾನಕ್ಕೆ ಬಳ್ಳನೆ ಕೃಷ್ಣ ಶೆಟ್ಟಿಗಾರ್ ಅವರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಸಂಘಟನಾ ಕಾರ್ಯದರ್ಶಿ ಅಶ್ವಿನ್ ಕುಮಾರ್ ಅತಿಥಿಗಳನ್ನು ಗೌರವಿಸಿದರು.
ಕ್ರೀಡಾ ಸಾಧಕರಾದ ಕಿರಣ ಕುಮಾರ್ ಹೆಂಗವಳ್ಳಿ ಮತ್ತು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶ್ರೀಮತಿ ದೀಪ ಶೆಟ್ಟಿಗಾರ್, ನಾಗೇಶ್ ಶೆಟ್ಟಿಗಾರ್, ಅರುಣ ಶೆಟ್ಟಿಗಾರ್ ಎಡಮಕ್ಕಿ ವಿವಿಧ ಪಟ್ಟಿಗಳನ್ನು ವಾಚಿಸಿದರು.
ಶಂಕರನಾರಾಯಣ ಬೆರ್ಕಿ ಶೇಖರ ಶೆಟ್ಟಿಗಾರ್ ಸ್ವಾಗತಿಸಿದರು.ಕೋಶಾಧಿಕಾರಿ ವಿಶ್ವನಾಥ್ ಶೆಟ್ಟಿಗಾರ್ ತೊಂಬಟ್ಟು ವಾರ್ಷಿಕ ಆಯವ್ಯಯ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿಗಾರ ಶಂಕರನಾರಾಯಣ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಪ್ರವೀಣ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಶೆಟ್ಟಿಗಾರ್ ವಂದಿಸಿದರು.
ನಂತರ ಸಂಘದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.